kannada

ಪಾಸಿಂಗ್ ಪ್ಯಾಕೇಜ್ 

webdesk | Tuesday, January 24, 2017 7:43 PM IST

  ನಿಧಾನ ಕಲಿಕಾ ಸಾಮರ್ಥ್ಯದ ಮಕ್ಕಳಿಗೆ ಪರೀಕ್ಷೆಯು ಬಿಡಿಸಲಾಗದ ಕಗ್ಗಂಟಾಗಿರುತ್ತದೆ. ‘ಪಠ್ಯಕ್ರಮ, ಪಠ್ಯಪುಸ್ತಕ, ಪರೀಕ್ಷೆ ನಮ್ಮ ಸಾಮರ್ಥ್ಯ ಮೀರಿದವು’ ಎಂದು ಅವರು ಭಾವಿಸಿರುತ್ತಾರೆ. ‘ಪರೀಕ್ಷೆಯಲ್ಲಿ ಪಾಸಾಗುವುದು ಸವಾಲಿನ ಕೆಲಸ, ಅದು ನನ್ನಿಂದ ಸಾಧ್ಯವಿಲ್ಲ. ಇಷ್ಟು ದೊಡ್ಡ ಪಠ್ಯಪುಸ್ತಕವನ್ನು ಓದಿ ಮುಗಿಸುವುದಾದರೂ ಹೇಗೆ? ಓದಿದ್ದನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದಾದರೂ ಹೇಗೆ ?’ ಎಂದು ಅವರು ಭಾವಿಸಿಕೊಳ್ಳುತ್ತಾರೆ. ಕೆಲವೊಮ್ಮೆ ‘ನೀನು ಹೆಡ್ಡ, ನೀನು ದಡ್ಡ, ನಿನ್ನ ತಲೆಗೆ ವಿದ್ಯೆ ಹತ್ತುವುದಿಲ್ಲ...’ ಎಂದು  ಪೋಷಕರು ಅಥವಾ ಶಿಕ್ಷಕರು ಸದಾ ನಿಂದಿಸುವುದೂ ಇದಕ್ಕೆ ಕಾರಣವಾಗಿರುತ್ತದೆ. ಈ ದಿಕ್ಕಿನಲ್ಲಿ ‘ಪಾಸಿಂಗ್ ಪ್ಯಾಕೇಜ್‌’ ಮಕ್ಕಳಿಗೆ ಅಗತ್ಯವಿರುವ ಮಾನಸಿಕ ಬೆಂಬಲವನ್ನು ಒದಗಿಸುತ್ತದೆ. ಪರೀಕ್ಷಾ ದೃಷ್ಟಿಯಿಂದ ಅತಿ ಮಹತ್ವದ ಪ್ರಶ್ನೆಗಳನ್ನು ಆಧರಿಸಿ ವಿಷಯವಾರು ಚಿಕ್ಕ ಕೈಪಿಡಿಗಳನ್ನು ತಯಾರಿಸಿ ಮಕ್ಕಳಿಗೆ ಒದಗಿಸಲಾಗುತ್ತದೆ. ಈ ಕೈಪಿಡಿಗಳನ್ನು ನುರಿತ ಶಿಕ್ಷಕರು, ಸಂಪನ್ಮೂಲ ವ್ಯಕ್ತಿಗಳು ಸಿದ್ಧಪಡಿಸಿರುತ್ತಾರೆ. ಹಲವು ವರ್ಷಗಳ ಪ್ರಶ್ನೆಪತ್ರಿಕೆಗಳ ಪರಾಮರ್ಶೆ, ಪೂರ್ವಭಾವಿ ‘ನೀಲನಕ್ಷೆ’ ಆಧರಿಸಿ ಈ ಕೈಪಿಡಿಗಳನ್ನು ರಚಿಸಲಾಗಿರುತ್ತದೆ. ಪಠ್ಯಪುಸ್ತಕಕ್ಕೆ ಹೋಲಿಸಿದರೆ, ಈ ಕೈಪಿಡಿಯ ಗಾತ್ರ ತುಂಬ ಚಿಕ್ಕದಾಗಿರುತ್ತದೆ. ಇದರಿಂದ ನಿಧಾನ ಕಲಿಕಾ ಸಾಮರ್ಥ್ಯದ ಮಕ್ಕಳಲ್ಲಿ ‘ಇಷ್ಟು ಓದಿದರೆ ನಾನು ಪಾಸಾಗಬಹುದು’ ಎಂಬ ಧೈರ್ಯ ಮೂಡುತ್ತದೆ. ಅಂಕ ಗಳಿಸುವ ಸರಳ ಸೂತ್ರ ಪ್ರಸ್ತುತ ಪರೀಕ್ಷಾ ಕ್ರಮದಲ್ಲಿ ಶೇ. 80ರಷ್ಟು ಅಂಕಗಳು ಬಾಹ್ಯಪರೀಕ್ಷೆಗೆ ನಿಗದಿಯಾಗಿದ್ದು ಶೇ. 20ರಷ್ಟು ಆಂತರಿಕ ಮೌಲ್ಯಮಾಪನಕ್ಕೆ ನಿಗದಿಯಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಪಾಸಾಗಲು 80 ಅಂಕಗಳಿಗೆ ಕನಿಷ್ಠ 28 ಅಂಕಗಳನ್ನು ಗಳಿಸುವುದು ಅನಿವಾರ್ಯ.  ಮಕ್ಕಳಿಗೆ ವಿಷಯವಾರು ಕನಿಷ್ಠ 40ರಿಂದ 50 ಅಂಕಗಳನ್ನು ಗಳಿಸುವ ಸುಲಭದ ದಾರಿಯನ್ನು ಮನನ ಮಾಡಿಕೊಡಲಾಗುತ್ತದೆ. ಆಯಾ ವಿಷಯದಲ್ಲಿ ಕೆಲವು ಮಾದರಿಯ ಪ್ರಶ್ನೆಗಳು ಬಂದೇ ಬರುತ್ತವೆ ಎಂಬುದನ್ನು ಮಕ್ಕಳಿಗೆ ತಿಳಿಸಿ, ಅದಕ್ಕೆ ಅಗತ್ಯ ಸಿದ್ಧತೆ ಒದಗಿಸಲಾಗುತ್ತದೆ.