kannada

ಅಲ್ಪಸಂಖ್ಯಾತ ಸಂಶೋಧನಾ ವಿದ್ಯಾರ್ಥಿಗಳಿಗೆ  ಬಂಪರ್ ಕೊಡುಗೆ 

webdesk | Friday, February 3, 2017 7:08 PM IST

ಅಲ್ಪಸಂಖ್ಯಾತ ಸಂಶೋಧನಾ ವಿದ್ಯಾರ್ಥಿಗಳಿಗೆ  ಬಂಪರ್ ಕೊಡುಗೆ 

ಬೆಂಗಳೂರು: ಅಲ್ಪಸಂಖ್ಯಾತ ಸಂಶೋಧನಾ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಬಂಪರ್ ಕೊಡುಗೆ ನೀಡಿದ್ದು, ಅಲ್ಪಸಂಖ್ಯಾತ ವಿಷಯಗಳ ಕುರಿತು ಪಿ.ಎಚ್​ಡಿ /ಎಂ.ಫಿಲ್ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಫೆಲೋ ಶಿಪ್ ಭಾಗ್ಯ ಕಲ್ಪಿಸಿದೆ.  ಜೆಆರ್​ಎಫ್(ಜೂನಿಯರ್ ರೀಸರ್ಚ್ ಫೆಲೋಶಿಪ್)ಮಾದರಿಯಲ್ಲಿ ಇದೇ ಮೊದಲ ಬಾರಿಗೆ ಇಂಥ ಯೋಜನೆ ಘೊಷಿಸಿರುವ ಸರ್ಕಾರ ಮಾಸಿಕ 25 ಸಾವಿರ ರೂ. ಶಿಷ್ಯ ವೇತನ ನೀಡಲು ನಿರ್ಧರಿಸಿದೆ. ದೇಶದ ಯಾವುದೇ ಅಂಗೀಕೃತ ವಿವಿಯಲ್ಲಿ ಸಂಶೋಧನೆ ಮಾಡುತ್ತಿರುವ ರಾಜ್ಯದ ವಿದ್ಯಾರ್ಥಿಗಳಿಗೆ ಯೋಜನೆ ಅನ್ವಯವಾಗಲಿದೆ.

ಸ್ನಾತಕೋತ್ತರ ಪದವಿ ಬಳಿಕ ಎಂಫಿಲ್ ಅಥವಾ ಪಿಎಚ್​ಡಿ ಪದವಿಗಾಗಿ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗುತ್ತಾರೆ. ಈ ಪದವಿಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಯುಜಿಸಿ ಪರೀಕ್ಷೆ ನಡೆಸುತ್ತದೆ. ಆ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಆಯ್ದ ಕೆಲವರು ಜೆಆರ್​ಎಫ್ ಶಿಷ್ಯ ವೇತನಕ್ಕೆ ಅರ್ಹರಾಗುತ್ತಾರೆ. ಆದರೆ, ರಾಜ್ಯದಲ್ಲಿ ಅಲ್ಪಸಂಖ್ಯಾತ ವಿಷಯಗಳ ಕುರಿತು ಅಧ್ಯಯನ, ಸಂಶೋಧನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಯಾವುದೇ ಫೆಲೋಶಿಪ್ ಇಲ್ಲ. ಆದ್ದರಿಂದ ಜೆಆರ್​ಎಫ್ ಮಾದರಿಯಲ್ಲಿ ಫೆಲೋಶಿಪ್ ನೀಡಲು ನಿರ್ಧರಿಸಲಾಗಿದೆ. ಫೆಲೋಶಿಪ್​ಗೆ ಆಯ್ಕೆಯಾಗುವ ವಿದ್ಯಾರ್ಥಿಗೆ 2 ವರ್ಷ ಪ್ರತಿ ತಿಂಗಳು 25 ಸಾವಿರ ರೂ. ಮತ್ತು ವಾರ್ಷಿಕ 10 ಸಾವಿರ ರೂ. ನಿರ್ವಹಣಾ ವೆಚ್ಚ ಭರಿಸಲಾಗುತ್ತದೆ.

ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧ, ಸಿಖ್ ಹಾಗೂ ಪಾರ್ಸಿ ಜನಾಂಗಗಳ ವಿದ್ಯಾರ್ಥಿಗಳಿಗೆ ಯೋಜನೆ ಅನ್ವಯಿಸಲಿದೆ. ಅಭ್ಯರ್ಥಿಯು ಕರ್ನಾಟಕದ ಮೂಲ ನಿವಾಸಿಯಾಗಿರಬೇಕು. ಕುಟುಂಬದ ವಾರ್ಷಿಕ ವರಮಾನ 6 ಲಕ್ಷ ಮೀರಿರಬಾರದು. ಅಂಗೀಕೃತ ವಿವಿಯಲ್ಲಿಯೇ ಸಂಶೋಧನೆ ಮಾಡುತ್ತಿರಬೇಕು. ವಯಸ್ಸು 35 ವರ್ಷ ಮೀರಿರಬಾರದು. ಸರ್ಕಾರಿ ಉದ್ಯೋಗಿ ಆಗಿರಬಾರದು. ಅಲ್ಪಸಂಖ್ಯಾತರ ಅಧ್ಯಯನ ಪೀಠ ವಿದ್ಯಾರ್ಥಿಗಳು ಸಲ್ಲಿಸುವ ಅರ್ಜಿಗಳನ್ನು ಪರಿಶೀಲಿಸಿ, ಅರ್ಹ ಅಭ್ಯರ್ಥಿಗಳನ್ನು ಫೆಲೋಶಿಪ್​ಗೆ ಆಯ್ಕೆ ಮಾಡುತ್ತದೆ.