kannada

ಡಬಲ್‌ ಡಿಗ್ರಿ

webdesk | Saturday, January 21, 2017 6:21 PM IST

ಒಂದೇ ಸಾರಿ ಎರಡು ಪದವಿಯನ್ನು ಪಡೆಯುವ ಅವಕಾಶವನ್ನು ಕೆಲವು ಕಾಲೇಜುಗಳು ನೀಡುತ್ತಿವೆ. ಇಂತಹ ಅವಳಿ ಕೋರ್ಸ್‌ಗಳನ್ನು ಕಲಿತರೆ ಉದ್ಯೋಗಾವಕಾಶವೂ ಉತ್ತಮವಾಗಿರುತ್ತದೆ. ಎರಡು ಪದವಿಗಳಿಗೆ ಬೇಕಾದ ಅಗತ್ಯಗಳನ್ನು ನೀವು ಪೂರೈಸಿಕೊಂಡರೆ ಇಂತಹ ಕೋರ್ಸ್‌ಗಳಿಗೆ ಸೇರಬಹುದಾಗಿದೆ. ಏನಿದು ಅವಳಿ ಪದವಿ?: ಡ್ಯೂಯಲ್‌ ಡಿಗ್ರಿ ಪ್ರೋಗ್ರಾಮ್‌ ಎನ್ನುವುದು ಒಂದೇ ಬಾರಿ ಎರಡು ಪದವಿಯನ್ನು ಪಡೆಯಲು ಇಚ್ಚಿಸುವ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ರಚಿಸಲಾದ ಏಕಕಾಲಿಕ ಪದವಿಯಾಗಿದೆ. ಈ ಎರಡು ಪದವಿಗಳು ಒಂದಕ್ಕೊಂದು ಪೂರಕವಾಗಿರಬಹುದು, ಒಂದಕ್ಕೊಂದು ಭಿನ್ನವಾಗಿರಬಹುದು. ಉದಾಹರಣೆಗೆ ಎಂಬಿಎ ಜೊತೆಗೆ ಕಾನೂನು, ಎಂಜಿನಿಯರಿಂರಿಂಗ್‌, ಟೆಕ್ನಾಲಜಿ, ಅಂತಾರಾಷ್ಟ್ರೀಯ ಅಧ್ಯಯನ, ಆರೋಗ್ಯ ಸೇವೆ, ಆಡಳಿತ, ಸಾರ್ವಜನಿಕ ನೀತಿ ಇತ್ಯಾದಿ ಪದವಿಗಳು ಇವೆ. ಡ್ಯೂಯಲ್‌ ಪದವಿ ಅವಶ್ಯಕತೆಯೇನು?: ಅವಳಿ ಪದವಿಯಿಂದ ಹಲವು ಪ್ರಯೋಜನಗಳು ಇವೆ. * ಎಂಬಿಎ-ಕಾನೂನು ಎಂಬ ಡ್ಯೂಯಲ್‌ ಪದವಿ ಪಡೆದವರು ಕಂಪನಿಯೊಂದರಲ್ಲಿ ಕೆಲಸ ಮಾಡುವಾಗ ಕಾನೂನು ಸಂಬಂಧಿತ ಜ್ಞಾನವನ್ನೂ ಹೊಂದಿರಬಹುದು. * ನೀವು ಬಿಸ್ನೆಸ್‌ ಮತ್ತು ಎಂಜಿನಿಯರಿಂಗ್‌ ಅವಳಿ ಪದವಿಯನ್ನು ಪಡೆದಿರಿ ಎಂದಿರಲಿ. ಎಂಜಿನಿಯರಿಂಗ್‌ ಕ್ಷೇತ್ರದ ವ್ಯವಹಾರಕ್ಕೆ ಸಂಬಂಧಪಟ್ಟ ವಿಷಯವನ್ನು ತಿಳಿಯಲು ನಿಮಗೆ ಇದರಿಂದ ಸಾಧ್ಯವಾಗುತ್ತದೆ. ಎಲ್ಲಾದರೂ ನೀವು ಎಂಬಿಎ ಸಂಬಂಧಿತ ಹುದ್ದೆಯನ್ನು ಪಡೆದರೆ ಅಲ್ಲಿನ ತಂತ್ರಜ್ಞಾನ ಆಧರಿತ ಸಂಗತಿಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಸಿಂಗಲ್‌ ಡಿಗ್ರಿ ಮಾಡಿದವರಿಗಿಂತ ಡಬಲ್‌ ಡಿಗ್ರಿಗಳ ಜ್ಞಾನ ಉತ್ತಮವಾಗಿರುವ ಸಾಧ್ಯತೆ ಹೆಚ್ಚಿದೆ. * ನೀವು ಲಾಯರ್‌ ಅಥವಾ ಡಾಕ್ಟರ್‌ ಆಗಬೇಕೆಂದಿದ್ದರೆ ಅದರ ಜೊತೆ ಎಂಬಿಎ ಇರುವ ಡ್ಯೂಯೆಲ್‌ ಕೋರ್ಸ್‌ ಪಡೆಯಬಹುದು. ಉದ್ಯೋಗ ಕ್ಷೇತ್ರ ಬೇರೆ ಆದರೂ ಈ ಮೂಲಕ ವ್ಯವಹಾರದ ತತ್ವಗಳಲ್ಲಿಯೂ ಪರಿಣತಿ ಪಡೆಯಬಹುದು. ಸಮಯದ ಉಳಿತಾಯ: ನೀವು ಎಂಬಿಎ ಮುಗಿಸಿದ ನಂತರ ಮತ್ತೊಂದು ಪದವಿಗೆ ಜಂಪ್‌ ಮಾಡುವುದು ಕಷ್ಟ. ಅದಕ್ಕಾಗಿ 2ರಿಂದ 3 ವರ್ಷಗಳನ್ನು ವಿನಿಯೋಗಿಸಬೇಕಾಗುತ್ತದೆ. ಡ್ಯೂಯೆಲ್‌ ಡಿಗ್ರಿ ಕಾರ್ಯಕ್ರಮದಡಿ ಒಂದೇ ಸಮಯದಲ್ಲಿ ನೀವು ಎರಡು ಪದವಿಯನ್ನು ಪೂರ್ಣಗೊಳಿಸಬಹುದಾಗಿದೆ. ಒಂದು ಕೋರ್ಸ್‌ನಲ್ಲೇ ಓದಲು, ಬರೆಯಲು ಸಾಕಷ್ಟಿರುತ್ತದೆ. ಈ ಲೋಡ್‌ಗೆ ಇನ್ನೊಂದಿಷ್ಟು ಲೋಡ್‌ ಸೇರಿಸಿದರೆ ನೀವು ಕೆಲವು ವರ್ಷಗಳನ್ನು ಉಳಿಸಬಹುದು. ಉದ್ಯೋಗ ಬದಲಾಯಿಸಲು ಅನುಕೂಲ: ಮುಂದೊಂದು ದಿನ ಈಗ ನೀವು ಮಾಡುತ್ತಿರುವ ಕೆಲಸ ಇಷ್ಟವಾಗದೆ ಹೋಗಬಹುದು. ಇನ್ಯಾವುದೋ ಕ್ಷೇತ್ರ ಆಕರ್ಷಕವಾಗಿ ಕಾಣಬಹುದು. ನಿಮ್ಮಲ್ಲಿ ಎರಡು ಪದವಿ ಇದ್ದರೆ ಆ ಕ್ಷೇತ್ರದ ಉದ್ಯೋಗಕ್ಕೂ ಪ್ರಯತ್ನಿಸಬಹುದು. ಉದ್ಯೋಗವನ್ನು ಒಂದೇ ಕ್ಷೇತ್ರದಲ್ಲಿ ಬದಲಾಯಿಸುವುದಕ್ಕಿಂತ, ಭಿನ್ನ ಕ್ಷೇತ್ರದಲ್ಲಿ ಬದಲಾಯಿಸುವ ಅವಕಾಶ ನಿಮಗಿಲ್ಲಿ ದೊರಕುತ್ತದೆ. ಅಗತ್ಯವಿದ್ದರೆ ಮಾತ್ರ ಮಾಡಿ: ಎರಡು ದೋಣಿಗೆ ಕಾಲಿಡಬಾರದು ಎನ್ನುವ ಮಾತೊಂದಿದೆ. ನೀವು ಆ ಕ್ಷೇತ್ರದಲ್ಲಿ ಏನಾದರೂ ಕೆಲಸ ಮಾಡಲು ಇಚ್ಚಿಸದರೆ ಮಾತ್ರ ಎರಡು ಪದವಿಗಳನ್ನು ಒಂದೇ ಕಾಲಕ್ಕೆ ಮಾಡಿ. ಸದ್ಯ ಐಐಟಿ ಸೇರಿದಂತೆ ಹಲವು ಕಾಲೇಜುಗಳಲ್ಲಿ ಇಂತಹ ಡಬಲ್‌ ಡಿಗ್ರಿಗಳನ್ನು ಪಡೆಯುವ ಅವಕಾಶವಿದೆ. ಗೂಗಲ್‌ನಲ್ಲಿ ಹುಡುಕಿದರೆ ನೂರಾರು ಡ್ಯೂಯೆಲ್‌ ಪದವಿಗಳ ಮಾಹಿತಿ ದೊರಕುತ್ತದೆ. ಅವುಗಳಲ್ಲಿ ಅವಳಿ ಪದವಿಗಳ ಹೆಸರು ಈ ರೀತಿ ಇದೆ. * ಬಿಟೆಕ್‌ ಮತ್ತು ಎಂಟೆಕ್‌ * ಬಿಟೆಕ್‌ ಮತ್ತು ಎಂಬಿಎ * ಬಿಬಿಎ ಮತ್ತು ಎಂಬಿಎ * ಬಿಟೆಕ್‌ ಮತ್ತು ಎಂಎಸ್‌ *ಪಿಜಿಡಿಬಿಎ + ಎಂಬಿಎ * ಬಿಎ+ಎಲ್‌ಎಲ್‌ಬಿ * ಬಿಬಿಎ +ಎಲ್‌ಎಲ್‌ಬಿ * ಬಿ.ಫಾರ್ಮಾ + ಎಂ.ಫಾರ್ಮಾ