news

ಜ.15ರೊಳಗೆ ವರದಿ ಬಂದರೆ ಹೊಸ ಪಠ್ಯಕ್ರಮ: ತನ್ವೀರ್

webdesk | Thursday, December 29, 2016 2:23 PM IST

ಬೆಂಗಳೂರು: ಸಾಹಿತಿ ಬರಗೂರು ರಾಮಚಂದ್ರಪ್ಪ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ  ಜ.15ರೊಳಗೆ ವರದಿ ನೀಡಿದರೆ ಮಾತ್ರ ಮುಂದಿನ ಶೈಕ್ಷಣಿಕ ವರ್ಷದಿಂದ ಹೊಸ ಪಠ್ಯಕ್ರಮ ಜಾರಿ ಮಾಡಲಾಗುವುದು ಎಂದು ಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದರು. ಸರ್ಕಾರ ಸಿದ್ಧಪಡಿಸಿರುವ 2017ರ ಕ್ಯಾಲೆಂಡರ್‌ ಬಿಡುಗಡೆ ಮಾಡಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ  ಮಾತನಾಡಿದರು.

ರಾಯಚೂರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಇದ್ದ ಕಾರಣ ತಡವಾಗಿದ್ದು, ಇದೇ 8ರೊಳಗೆ ವರದಿ ನೀಡುವುದಾಗಿ ಸಮಿತಿ ತಿಳಿಸಿತ್ತು.  ಆದರೆ, ಈವರೆಗೆ ವರದಿ ಇಲಾಖೆ ಕೈ ಸೇರಿಲ್ಲ ಎಂದರು.

ಪಠ್ಯ ಪುಸ್ತಕ ಸಕಾಲದಲ್ಲಿ ಶಾಲೆಗಳಿಗೆ ತಲುಪುವಂತೆ ನೋಡಿಕೊಳ್ಳಬೇಕು.  ಸಮಿತಿ ವರದಿ ನೀಡಿದ ನಂತರ ಅದನ್ನು  ಪರಿಶೀಲಿಸಲು ಕಾಲಾವಕಾಶ ಬೇಕು. ಹೀಗಾಗಿ, ಜ.15ರೊಳಗೆ ವರದಿ ನೀಡಿದರೆ ಮಾತ್ರ ಮುಂದಿನ ವರ್ಷದಿಂದ ಹೊಸ ಪಠ್ಯಕ್ರಮ ಜಾರಿಗೆ ಅನುಕೂಲ ಆಗುತ್ತದೆ ಎಂದು ಹೇಳಿದರು. ಸರ್ಕಾರದ ಹೊಸ ಕ್ಯಾಲೆಂಡರ್‌ನಲ್ಲಿ   ಅನ್ನಭಾಗ್ಯ, ಕೃಷಿಭಾಗ್ಯ, ವಿದ್ಯಾಸಿರಿ ಸೇರಿದಂತೆ ವಿವಿಧ ಯೋಜನೆಗಳ ಮಾಹಿತಿ ನೀಡಲಾಗಿದೆ ಎಂದು ವಿವರಿಸಿದರು.

ನಿಗದಿತ ಅವಧಿಯೊಳಗೆ ಪರಿಷ್ಕೃತ ಪಠ್ಯ ಸಲ್ಲಿಕೆ: ಬರಗೂರು
ಬೆಂಗಳೂರು: ‘ಮುಖ್ಯಮಂತ್ರಿ ಮುಂದೆ ಕೊಟ್ಟಿರುವ ಭರವಸೆಯಂತೆ ನಿಗದಿತ ಅವಧಿಯೊಳಗೆ ಪರಿಷ್ಕೃತ ಪಠ್ಯಗಳನ್ನು ಸಲ್ಲಿಸಲಾಗುವುದು’ ಎಂದು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ಡಾ. ಬರಗೂರು ರಾಮಚಂದ್ರಪ್ಪ ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಪರಿಷ್ಕೃತ ಭಾಷಾ (ಕನ್ನಡ, ಇಂಗ್ಲಿಷ್, ಹಿಂದಿ) ಪಠ್ಯಗಳನ್ನು ಡಿ. 31ರೊಳಗೆ ಮತ್ತು ಸಾಮಾನ್ಯ ವಿಷಯದ ಪಠ್ಯಗಳನ್ನು (ವಿಜ್ಞಾನ, ಗಣಿತ, ಸಮಾಜ ವಿಜ್ಞಾನ) 2017ರ ಜ. 15ರೊಳಗೆ ಸಲ್ಲಿಸುವುದಾಗಿ ತಿಳಿಸಲಾಗಿದೆ ಎಂದು ಅವರು ಹೇಳಿದರು.

ಭಾಷಾ ಪಠ್ಯಗಳನ್ನು ಡಿ. 31ರಂದು ಸಲ್ಲಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರಿಗೆ ಈಗಾಗಲೇ ತಿಳಿಸಲಾಗಿದೆ. ಸಾಮಾನ್ಯ ವಿಷಯಗಳ ಪಠ್ಯ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಸಿದ್ಧವಿದೆ. ಆದರೆ, ಅವುಗಳನ್ನು ತಮಿಳು, ತೆಲುಗು, ಮರಾಠಿ ಮತ್ತಿತರ ಪ್ರಾದೇಶಿಕ ಭಾಷೆಗಳಿಗೆ ಅನುವಾದಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ವಿವರಿಸಿದರು.

‘ಮುಂದಿನ ಶೈಕ್ಷಣಿಕ ವರ್ಷದಿಂದ ಪರಿಷ್ಕೃತ ಪಠ್ಯ ಬೋಧಿಸಬೇಕು ಎಂದು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಸರ್ಕಾರದಲ್ಲಿ ಮುಖ್ಯಮಂತ್ರಿ ಮಾತೇ ಅಂತಿಮ ಎಂದು ಭಾವಿಸಿದ್ದೇನೆ’ ಎಂದೂ ಬರಗೂರು ವಿವರಿಸಿದರು.