kannada

ಇಪಿಎಫ್ ನೋಂದಣಿ ಆರಂಭ 

webdesk | Monday, January 23, 2017 7:40 PM IST

ಬೆಂಗಳೂರು ನಗರದಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್ಒ) ಕಾರ್ಮಿಕರ ನೋಂದಣಿ ಅಭಿಯಾನ ಆರಂಭಿಸಿದೆ ಎಂದು ಹೆಚ್ಚುವರಿ ಕೇಂದ್ರೀಯ ಭವಿಷ್ಯನಿಧಿ ಆಯುಕ್ತ ವಿಜಯಕುಮಾರ್‌ ತಿಳಿಸಿದ್ದಾರೆ. ನೌಕರರ ನೋಂದಣಿ ಅಭಿಯಾನ ಮಾರ್ಚ್‌ 31ರ ವರೆಗೆ ನಡೆಯಲಿದ್ದು, 2009ರ ಏಪ್ರಿಲ್‌ 1ರಿಂದ 2016ರ ಡಿಸೆಂಬರ್‌ ನಡುವಣ ಅವಧಿಯಲ್ಲಿ ಭವಿಷ್ಯನಿಧಿ ಸದಸ್ಯತ್ವ ಪಡೆಯದ ಉದ್ಯೋಗಿಗಳನ್ನು ಈಗ ಪಿಎಫ್‌ ವ್ಯಾಪ್ತಿಗೆ ಒಳಪಡಿಸಲಾಗುವುದು ಎಂದರು. ಪಿಎಫ್ ನೋಂದಣಿ ವೇಳೆ ನೌಕರರು ಯಾವುದೇ ರೀತಿಯ ಆಡಳಿತಾತ್ಮಕ ವೆಚ್ಚ ಭರಿಸ ಬೇಕಾಗಿಲ್ಲ. ಪಿಎಫ್ ನಿಧಿಯ ಕಾರ್ಮಿಕರ ಪಾಲನ್ನು ಅವರ ಸಂಬಳದಲ್ಲಿ ಕಡಿತ ಮಾಡದೆ ಇದ್ದಲ್ಲಿ ಅದನ್ನು ಕಟ್ಟಬೇಕಾಗಿಲ್ಲ. ತಮ್ಮ ಪಾಲನ್ನು (ಬೆಸಿಕ್ ಸ್ಯಾಲರಿ ಶೇ. 12) ಮಾತ್ರ ನೌಕರರು ಕಟ್ಟಿದರೆ ಸಾಕು ಎಂದು ಹೇಳಿದರು. ಪಿಎಫ್ ಸಂಘಟನೆ ನೀಡಿರುವ ನಿರ್ದಿಷ್ಟ ನಮೂನೆಯಲ್ಲಿಯೇ ನೌಕರರು ಘೋಷಣೆ ಸಲ್ಲಿಸಬೇಕಾಗಿದ್ದು, ಈಗಿರುವ ಹಾಗೂ ಜೀವಂತವಾಗಿರುವ ನೌಕರರಿಗೆ ಮಾತ್ರ ಈ ಘೋಷಣೆ ಅನ್ವಯವಾಗುತ್ತದೆ ಎಂದರು. ಹತ್ತು ವರ್ಷ ಸೇವೆ ಸಲ್ಲಿಸಿದವರು ಪಿಂಚಣಿ ಪಡೆಯಲು ಅರ್ಹರಾಗಿದ್ದು, ಕನಿಷ್ಠ ಪಿಂಚಣಿ ಮೊತ್ತ ರೂ.1 ಸಾವಿರಕ್ಕೆ ಹೆಚ್ಚಿಸಲಾಗಿದೆ. ನೌಕರಿ ಬದಲಾಯಿಸಿದಾಗ ಭವಿಷ್ಯನಿಧಿ ಖಾತೆಯನ್ನು ವರ್ಗಾಯಿಸುವ ಸಮಸ್ಯೆಯನ್ನೂ ಯುಎಎನ್ ವ್ಯವಸ್ಥೆ ನಿವಾರಿಸಲಿದೆ. ಅಲ್ಲದೆ ಖಾತೆ ವರ್ಗಾಯಿಸಲು ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ ಎಂದರು.