kannada

ನೆಟ್‌ ಎಗ್ಸಾಮ್‌ಗೆ  ಟಿಪ್ಸ್ 

webdesk | Saturday, January 21, 2017 6:29 PM IST

ವಿಶ್ವವಿದ್ಯಾಲಯದ ಧನಸಹಾಯ ಆಯೋಗ (ಯುಜಿಸಿ)ನಡೆಸುವ ಅಖಿಲ ಭಾರತ ಮಟ್ಟದ ಉಪನ್ಯಾಸಕರ ಅರ್ಹತಾ ಪರೀಕ್ಷೆ (ನೆಟ್‌) ಎಗ್ಸಾಮ್‌ ನಿಗದಿಯಂತೆ ಜನವರಿ 22ರ ಭಾನುವಾರ ದೇಶದಾದ್ಯಂತ ನಡೆಯುತ್ತಿದೆ. ಈ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವವರಿಗೆ ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಯುಜಿಸಿಯ ಪರವಾಗಿ ಸಿಬಿಎಸ್‌ಇ ಈ ಪರೀಕ್ಷೆಯನ್ನು ನಡೆಸಿಕೊಂಡು ಬಂದಿದ್ದು, ಪರೀಕ್ಷೆ ಮತ್ತು ಇತರ ಎಲ್ಲ ಮಾಹಿತಿಯನ್ನು ವೆಬ್‌ನಲ್ಲಿ ಮಾತ್ರ ಪ್ರಕಟಿಸುತ್ತಿದೆ. * ಇಂಟರ್‌ನೆಟ್‌ನಲ್ಲಿ ಮತ್ತು ಯುಜಿಸಿಯ ವೆಬ್‌ನಲ್ಲಿ ಹಳೆಯ ಪ್ರಶ್ನೆ ಪತ್ರಿಕೆಗಳು ಲಭ್ಯವಿವೆ. ಇದನ್ನು ಡೌನ್‌ಲೋಡ್‌ ಮಾಡಿಕೊಂಡು ಪರೀಕ್ಷೆ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳಿ. ಪರೀಕ್ಷೆ ಎದುರಿಸಲು ಮಾನಸಿಕವಾಗಿ ಸಿದ್ಧರಾಗಿ. * ನೆಟ್‌ ಎಗ್ಸಾಮ್‌ ಬರೆದಿರುವವರ ಪ್ರಕಾರ ನಿಗದಿತ ಅವಧಿಯಲ್ಲಿ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವುದು ನಿಜವಾಗಿಯೂ ಸವಾಲಾಗಿರುತ್ತದೆ. ಸರಿಯಾಗಿ ಸಮಯ ನಿರ್ವಹಣೆ ಮಾಡುವ ಮೂಲಕ ಈ ಸವಾಲನ್ನು ಎದುರಿಸಬಹುದಾಗಿದ್ದು, ಈ ಬಗ್ಗೆ ತಜ್ಞರಿಂದ ಮಾರ್ಗದರ್ಶನ ಪಡೆದುಕೊಳ್ಳಿ. ನೀವೇ ಮಾಕ್‌ ಟೆಸ್ಟ್‌ ನಡೆಸಿಕೊಂಡು ಸಮಯ ನಿರ್ವಹಿಸುವುದನ್ನು ಕಲಿತುಕೊಳ್ಳಿ. * ಮೊದಲ ಪತ್ರಿಕೆ ವಿಷಯ ಸುಲಭವಾಗಿರುತ್ತದೆ ಎಂದು ಕೆಲವರು ನಿರ್ಲಕ್ಷಿಸಿ, ಕೊನೆಗೆ ಪಶ್ಚಾತಾಪ ಪಡುತ್ತಿರುತ್ತಾರೆ. ಅಜ್ಬೆಕ್ಟೀವ್‌ ಟೈಪ್‌ನಲ್ಲಿ ನಡೆಯುವ ಈ ಪರೀಕ್ಷೆಯನ್ನು ಎದುರಿಸಲು ಕೂಡ ಸಾಕಷ್ಟು ಸಿದ್ಧತೆ ಬೇಕಾಗುತ್ತದೆ. ಮುಖ್ಯವಾಗಿ ಈ ಪರೀಕ್ಷೆಯಲ್ಲಿ ಕೆಲವು ಲಾಜಿಕ್‌ ಪ್ರಶ್ನೆಗಳು ಹೆಚ್ಚು ಸಮಯ ತೆಗೆದುಕೊಳ್ಳುತ್ತಿರುತ್ತವೆ. ಇವುಗಳನ್ನು ಸುಲಭವಾಗಿ ಬಿಡಿಸುವುದು ಹೇಗೆಂದು ತಿಳಿದುಕೊಳ್ಳಿ. ನೀವು ಇದರಲ್ಲಿ ಯಶಸ್ವಿಯಾದಿರೆಂದರೆ ಪರೀಕ್ಷೆಯ ಮೊದಲ ಪತ್ರಿಕೆಯಲ್ಲಿ ಉತ್ತೀರ್ಣರಾದಿರಿ ಎಂದೇ ಅರ್ಥ. * ಪರೀಕ್ಷೆಯ ಹಿಂದಿನ ದಿನ ಸರಿಯಾಗಿ ವಿಶ್ರಾಂತಿ ತೆಗೆದುಕೊಳ್ಳಿ. ಸಮಯಕ್ಕೆ ಸರಿಯಾಗಿ ಪರೀಕಾ ಕೇಂದ್ರಕ್ಕೆ ಹೋಗಲು ಸಿದ್ಧತೆ ಮಾಡಿಕೊಳ್ಳಿ. ಏಕೆಂದರೆ ತಡವಾಗಿ ಪರೀಕ್ಷಾ ಕೇಂದ್ರಕ್ಕೆ ಹೋದರೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದಿಲ್ಲ. ಈ ಬಗ್ಗೆ ಎಚ್ಚರವಿರಲಿ. * ಪರೀಕ್ಷಾ ಕೇಂದ್ರಕ್ಕೆ ಹೋಗುವಾಗ ಪ್ರವೇಶ ಪತ್ರ ಇದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಪ್ರವೇಶ ಪತ್ರವಿಲ್ಲದೇ ಇದ್ದರೆ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುವುದಿಲ್ಲ. * ಪ್ರವೇಶ ಪತ್ರದೊಂದಿಗೆ ಫೋಟೋ ಇರುವ ಮೂಲ ಗುರುತಿನ ಚೀಟಿ ತೆಗೆದುಕೊಂಡು ಹೋಗಲು ಮರೆಯಬೇಡಿ. * ನೆಟ್‌ ಪರೀಕ್ಷೆಯಲ್ಲಿಯೂ ಮೌಲ್ಯಮಾಪನ ಮಾಡುವಾಗ ತಪ್ಪು ಉತ್ತರಗಳಿಗೆ ಅಂಕಗಳನ್ನು ಕಡಿತ ಮಾಡುವುದಿಲ್ಲ. ಈ ಬಗ್ಗೆ ಆತಂಕ ಬೇಡ. ಹೀಗಾಗಿ ನೀವು ಉತ್ತರದ ಬಗ್ಗೆ ಅನುಮಾನವಿದ್ದರೂ ಅದನ್ನು ಬರೆಯಲು ಹಿಂದೇಟು ಹಾಕಬೇಡಿ. * ಆತ್ಮವಿಶ್ವಾಸದಿಂದ ಪರೀಕ್ಷೆಗೆ ಹಾಜರಾಗಿ. ಪರೀಕ್ಷೆ ಬರೆಯುವ ಮೊದಲು ಯಾವೆಲ್ಲಾ ಸೂಚನೆಗಳನ್ನು ನೀಡಲಾಗಿದೆ ಎಂಬುದನ್ನು ಸರಿಯಾಗಿ ಓದಿಕೊಳ್ಳಿ. *ಒಎಂಆರ್‌ ಶೀಟನ್ನು ಹೇಗೆ ಭರ್ತಿ ಮಾಡಬೇಕು, ಎಲ್ಲಿ ಸಹಿ ಮಾಡಬೇಕು ಎಂಬುದರ ಬಗ್ಗೆ ಯುಜಿಸಿ ವೆಬ್‌ನಲ್ಲಿ ನೀಡಿರುವ ಮಾಹಿತಿಯನ್ನು ಓದಿ ತಿಳಿದುಕೊಳ್ಳಿ. ಸರಿಯುತ್ತರದ ಸರ್ಕಲ್ಲನ್ನು ಸರಿಯಾಗಿ ಫಿಲ್‌ ಮಾಡಿ. ಈ ಬಗ್ಗೆ ನೀಡಲಾಗಿರುವ ಸೂಚನೆಗಳನ್ನು ಗಮನಿಸಿ. *ಕೊನೆಗಳಿಗೆಯಲ್ಲಿ ಒಎಂಆರ್‌ ಶೀಟ್‌ ಭರ್ತಿ ಮಾಡುವ 'ಸಾಹಸ'ಕ್ಕೆ ಕೈ ಹಾಕಬೇಡಿ. ಪರೀಕ್ಷೆಗೆ ಹೋಗುವ ಮುನ್ನ ಬಾಲ್‌ಪೆನ್‌, ಇಂಕ್‌ಪೆನ್‌, ಪೆನ್ಸಿಲ್‌, ರಬ್ಬರ್‌ ಇರುವ ಬಗ್ಗೆ ಖಚಿತಪಡಿಸಿಕೊಳ್ಳಿ.ಕ್ಯಾಲುಕಲೇಟರ್‌ ಮತ್ತು ಲಾಗ್‌ ಟೇಬಲ್‌ ಬಳಕೆಗೆ ಅನುಮತಿ ಇರುವುದಿಲ್ಲ. * ಪರೀಕ್ಷೆಯಲ್ಲಿ ಪೆನ್ಸಿಲ್‌ ಬಳಕೆಯನ್ನು ನಿಷೇಧಿಸಲಾಗಿರುತ್ತದೆ. ಅಭ್ಯರ್ಥಿಗಳು ಪೆನ್ಸಿಲ್‌ನಿಂದ ಒಎಂಆರ್‌ ಶೀಟ್‌ ಭರ್ತಿ ಮಾಡಿದಲ್ಲಿ, ಅದನ್ನು ಮೌಲ್ಯಮಾಪನ ಮಾಡಲಾಗುವುದಿಲ್ಲ. * ಒಎಂಆರ್‌ ಶೀಟ್‌ನಲ್ಲಿ ಒಮ್ಮೆ ಭರ್ತಿ ಮಾಡಿದ ಮೇಲೆ ಮತ್ತೆ ಉತ್ತರವನ್ನು ಬದಲಾಯಿಸಲು ಅವಕಾಶವಿರುವುದಿಲ್ಲ. ಹೀಗಾಗಿ ಉತ್ತರದ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಂಡೇ ಒಎಂಆರ್‌ ಶೀಟ್‌ ಭರ್ತಿ ಮಾಡಿ. * ಒಎಂಆರ್‌ ಶೀಟ್‌ ಅನ್ನು ಪರೀಕ್ಷಾ ಅವಧಿಯಲ್ಲಿಯೇ ಭರ್ತಿ ಮಾಡಬೇಕು. ಇದಕ್ಕಾಗಿ ಪ್ರತ್ಯೇಕವಾಗಿ ಸಮಯ ನೀಡಲಾಗುವುದಿಲ್ಲ. *ಒಎಂಆರ್‌ ಶೀಟ್‌ನಲ್ಲಿ ಮೊಬೈಲ್‌ ನಂಬರ್‌ ಬರೆಯುವುದು ಅಥವಾ ಇನ್ಯಾವುದೇ ರೀತಿಯ ಗುರುತು ಮಾಡುವುದು ಮಾಡಿದರೆ ಅಂತಹ ಅಭ್ಯರ್ಥಿಗಳನ್ನು ಪರೀಕ್ಷೆಯಿಂದ ಅನರ್ಹಗೊಳಿಸಲಾಗುತ್ತದೆ. * ನೆಟ್‌ ಎಗ್ಸಾಮ್‌ನಲ್ಲಿ ಅರ್ಹತೆ ಪಡೆಯ ಬೇಕಾದರೆ ಪತ್ರಿಕೆ-1ರಲ್ಲಿ ಶೇ. 40, ಪತ್ರಿಕೆ-2ರಲ್ಲಿ ಶೇ. 40 ಮತ್ತು ಪತ್ರಿಕೆ-3ರಲ್ಲಿ ಶೇ. 50 ರಷ್ಟು ಅಂಕ ಪಡೆಯಲೇಬೇಕು. ಒಬಿಸಿ ಮತ್ತು ಎಸ್‌ಸಿಎಸ್‌ಟಿ ಅಭ್ಯರ್ಥಿಗಳು ಇದಕ್ಕಿಂತ ಶೇ. 5ರಷ್ಟು ಕಡಿಮೆ ಅಂಕ ಪಡೆದರೂ ಅರ್ಹತೆ ಪಡೆಯಬಹುದು. * ಎಲ್ಲ ವಿಷಯ ಮತ್ತು ವಿಭಾಗದಲ್ಲಿಯೂ ಅತಿ ಹೆಚ್ಚು ಅಂಕ ಪಡೆದ ಶೇ. 15ರಷ್ಟು ಅಭ್ಯರ್ಥಿಗಳು ಮಾತ್ರ ಅಸಿಸ್ಟೆಂಟ್‌ ಪ್ರೊಫೆಸರ್‌ ಆಗಲು ಅರ್ಹತೆ ಪಡೆದಿರುತ್ತಾರೆ ಎಂದು ಘೋಷಿಸಲಾಗುತ್ತದೆ. ಹೀಗಾಗಿ ಅರ್ಹತೆ ಪಡೆಯುವುದರ ಜತೆಗೆ ಹೆಚ್ಚು ಅಂಕ ಪಡೆಯಲು ಕೂಡ ನೀವು ಪ್ರಯತ್ನಿಸಬೇಕು. *ಪರೀಕ್ಷೆ ಮುಗಿದ ಮೇಲೆ ಅಟೆಂಡೆನ್ಸ್‌ ಶೀಟ್‌ಗೆ ಸಹಿ ಮಾಡಲೇ ಬೇಕಿರುತ್ತದೆ. ಟೆಸ್ಟ್‌ ಬುಕ್‌ಲೆಟ್‌ ಅನ್ನು ಮನೆಗೆ ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗುತ್ತದೆ. * ಪತ್ರಿಕೆ-1ರ ಪರೀಕ್ಷೆ ಬರೆಯದ ಅಭ್ಯರ್ಥಿಗಳಿಗೆ ಪತ್ರಿಕೆ-2 ಅಥವಾ ಪತ್ರಿಕೆ-3ರ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುವುದಿಲ್ಲ. *ಯಾವುದೇ ರೀತಿಯ ಎಲೆಕ್ಟ್ರಾನಿಕ್‌ ವಸ್ತುಗಳನ್ನು (ಮೊಬೈಲ್‌, ಬ್ಲೂಟೂತ್‌ ಇತ್ಯಾದಿ) ಪರೀಕ್ಷಾ ಕೇಂದ್ರಕ್ಕೆ ತೆಗೆದುಕೊಂಡು ಹೋಗುವಂತಿಲ್ಲ. ವಾಚ್‌ ಕಟ್ಟಿಕೊಂಡು ಹೋಗುವುದನ್ನು ಕೂಡ ನಿಷೇಧಿಸಲಾಗಿರುತ್ತದೆ. ಹೀಗಾಗಿ ವಾಚ್‌ ಇಲ್ಲದೇ ಸಮಯ ನಿರ್ವಹಿಸುವುದನ್ನು ಕಲಿತುಕೊಳ್ಳಿ. ಗಮನಿಸಿ: ಪರೀಕ್ಷಾ ಕೊಠಡಿಯಲ್ಲಿ ಗೋಡೆ ಗಡಿಯಾರ ಇರುತ್ತದೆ. * ಈ ಪರೀಕ್ಷೆಯಲ್ಲಿ ರೀ ವ್ಯಾಲ್ಯುವೇಷನ್‌ ಇರುವುದಿಲ್ಲ. * ಫಲಿತಾಂಶ ಪ್ರಕಟಿಸಿದ ನಂತರ ಪರೀಕ್ಷೆಗೆ ಹಾಜರಾದ ಎಲ್ಲ ಅಭ್ಯರ್ಥಿಗಳ ಅಂಕವನ್ನು ಸಿಬಿಎಸ್‌ಇಯ ವೆಬ್‌ನಲ್ಲಿ ಪ್ರಕಟಿಸಲಾಗುತ್ತದೆ. ಆದರೆ ಅರ್ಹತೆ ಪಡೆದವರ ಅಥವಾ ಪಡೆಯದವರ ಅಂಕಪಟ್ಟಿಯನ್ನು ಪ್ರಕಟಿಸುವುದಿಲ್ಲ. * ಪರೀಕ್ಷೆ ಮುಗಿದ ನಂತರ ಕೀ- ಉತ್ತರವನ್ನು ಪ್ರಕಟಿಸಲಾಗುತ್ತದೆ. ಇದಕ್ಕೆ ಆಕ್ಷೇಪಣೆಗಳಿದ್ದರೆ ಸಲ್ಲಿಸಬಹುದು. ಫಲಿತಾಂಶ ಪ್ರಕಟವಾದ ನಂತರ ಆಕ್ಷೇಪಣೆ ಸಲ್ಲಿಸಲು ಅವಕಾಶವಿರುವುದಿಲ್ಲ. * ರಾಜ್ಯದಲ್ಲಿ ಬೆಂಗಳೂರು, ಧಾರವಾಡ, ಕಲಬುರಗಿ, ಮಂಗಳೂರು ಮತ್ತು ಮೈಸೂರಿನಲ್ಲಿ ಮಾತ್ರ ಈ ಪರೀಕ್ಷೆ ನಡೆಯಲಿದೆ.