kannada

ಕಲಿಕೆ ಎನ್ನುವುದು ವೈಯಕ್ತಿ 

webdesk | Tuesday, January 24, 2017 6:57 PM IST

ಗುಂಪು ಅಧ್ಯಯನ ಅಥವಾ ಚರ್ಚೆಯನ್ನು ಒಂದು ಉತ್ತಮ ಅಭ್ಯಾಸ ಕ್ರಮವೆಂದು ಪರಿಗಣಿಸಲಾಗಿದೆ. ‘ಒಬ್ಬರಿಗಿಂತ ಇಬ್ಬರು ಉತ್ತಮ, ಇಬ್ಬರಿಗಿಂತ ಮೂವರು ಉತ್ತಮ’ ಎಂಬ ತತ್ವದಡಿಯಲ್ಲಿ ಒಬ್ಬರಿಂದ ಬಗೆಹರಿಯದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು, ಕಠಿಣ ವಿಷಯಗಳನ್ನು ಸುಲಭವಾಗಿ ಅರಿತುಕೊಳ್ಳಲು ಇದು ಸಹಕರಿಸುತ್ತದೆ. ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ವಿದ್ಯಾರ್ಥಿಗಳು, ನಿರ್ದಿಷ್ಟ ವಿಷಯ ಹಾಗೂ ಘಟಕಕ್ಕೆ ಸಂಬಂಧಿಸಿ ತಮ್ಮ ವಿಚಾರ, ಸಮಸ್ಯೆಗಳ ಕುರಿತು ಚಿಂತನ–ಮಂಥನ ನಡೆಸುವುದು ‘ಗುಂಪು ಅಧ್ಯಯನ’ ಅಥವಾ ‘ಚರ್ಚೆ’. ಈ ಗುಂಪು 2ರಿಂದ 4 ವಿದ್ಯಾರ್ಥಿಗಳಿಗೆ ಸೀಮಿತವಾಗಿದ್ದರೆ ಉತ್ತಮ. ವಿದ್ಯಾರ್ಥಿಗಳು ಗುಂಪು ಅಧ್ಯಯನಕ್ಕೆ ಸಂಬಂಧಿಸಿ ಸಮಾನಮನಸ್ಕರಾಗಿರಬೇಕು. ಯಾವ ವಿಷಯದ ಕುರಿತು, ಯಾವಾಗ, ಎಲ್ಲಿ ಚರ್ಚಿಸಬೇಕು ? ಅದಕ್ಕೆ ಏನೇನು ಪೂರ್ವಸಿದ್ಧತೆಯನ್ನು ಮಾಡಿಕೊಳ್ಳಬೇಕು ? ಪೂರ್ವಭಾವಿ ಅಧ್ಯಯನ ಹೇಗಿರಬೇಕು ? ಎಂಬುದನ್ನು ಸರಿಯಾಗಿ ಯೋಚಿಸಿ, ಯೋಜಿಸಿಕೊಳ್ಳಬೇಕು.

ಗುಂಪು ಅಧ್ಯಯನದಿಂದ ವೈಯಕ್ತಿಕ ಅಧ್ಯಯನ ಕ್ರಮಕ್ಕೆ ತೊಂದರೆ ಆಗದಂತೆ ಎಚ್ಚರ ವಹಿಸಬೇಕು. ಗುಂಪು ಅಧ್ಯಯನ ಕೈಗೊಳ್ಳಲು ನಿರ್ದಿಷ್ಟ ಸ್ಥಳ ಗುರುತಿಸುವುದು ಮುಖ್ಯ. ಈ ಸ್ಥಳ ನಿಮ್ಮ ಶಾಲೆ, ಕಾಲೇಜು, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ, ತರಗತಿ, ನಿಮ್ಮ ಅಥವಾ ಸ್ನೇಹಿತನ ಮನೆ, ದೇಗುಲದ ಆವರಣ, ತೋಟದಲ್ಲಿರುವ ಮರದ ನೆರಳು, ಉದ್ಯಾನ... ಹೀಗೆ ಯಾವುದಾದರೊಂದು ಶಾಂತಿಯುತ, ಗದ್ದಲದಿಂದ ಮುಕ್ತವಾದ ಸ್ಥಳವಾಗಿರಬೇಕು. ಸಾಮಾನ್ಯವಾಗಿ ಬೆಳಗಿನ 10ರಿಂದ ಮಧ್ಯಾಹ್ನ 1 ಅಥವಾ ಸಂಜೆ 5ರಿಂದ 8ರವರೆಗಿನ ಅವಧಿ ಗುಂಪು ಅಧ್ಯಯನಕ್ಕೆ ಉತ್ತಮವಾದುದು. ವೇಳೆಗೆ ಅನುಗುಣವಾಗಿ ಸರಿ ಹೊಂದುವ ಸ್ಥಳ ಆಯ್ಕೆ ಮಾಡಿಕೊಳ್ಳಬೇಕು. ಆ ಸ್ಥಳದಲ್ಲಿ ಗಾಳಿ, ಬೆಳಕು, ಕುಳಿತುಕೊಳ್ಳುವ ವ್ಯವಸ್ಥೆ, ಕುಡಿಯುವ ನೀರಿನ ಲಭ್ಯತೆ ಸಮರ್ಪಕವಾಗಿರಬೇಕು. ನೆಲದ ಮೇಲೆ ವೃತ್ತಾಕಾರದಲ್ಲಿ ಒಬ್ಬರ ಮುಖ ಇನ್ನೊಬ್ಬರಿಗೆ ಕಾಣುವಂತೆ ಸರಿಯಾದ ಭಂಗಿಯಲ್ಲಿ ಕುಳಿತು ಚರ್ಚೆ ನಡೆಸುವುದು ಉತ್ತಮ. ಕೂರಲು ಪೀಠೋಪಕರಣಗಳಿದ್ದರೂ ಆದೀತು.