kannada

ಕೆಎಎಸ್ ಸಂದರ್ಶನ ಹೇಗೆ ನಡೆಯಲಿದೆ

webdesk | Saturday, January 21, 2017 6:36 PM IST

ಬೆಂಗಳೂರು: ಕಳೆದ ಡಿಸೆಂಬರ್‌ 16ರಂದು ಆಯೋಗವು ಈ ಸಂಬಂಧ ತಿದ್ದುಪಡಿ ಅಧಿಸೂಚನೆ ಹೊರಡಿಸಿದ್ದು, ಅದರ ಪ್ರಕಾರವೇ ಸಂದರ್ಶನ ನಡೆಯುವುದು ಖಚಿತವಾಗಿದೆ. ಈ ಬಾರಿಯ ಸಂದರ್ಶನದಲ್ಲಿನ ಬದಲಾವಣೆಗಳೆಂದರೆ; *ಒಟ್ಟು 464 ಹುದ್ದೆಗಳಿಗೆ ಸಂಬಂಧಿಸಿ 1:3 ಅನುಪಾತದಲ್ಲಿ ಸಂದರ್ಶನ ನಡೆಯಲಿದೆ. * ವ್ಯಕ್ತಿತ್ವ ಪರೀಕ್ಷೆಗೆ 200 ಅಂಕಗಳನ್ನು ನಿಗದಿ ಪಡಿಸಿದ್ದು, ಅಭ್ಯರ್ಥಿಗಳು ಗಳಿಸುವ ಅಂಕಗಳನ್ನು ಗೌಪ್ಯವಾಗಿ ಇಡಲಾಗುತ್ತದೆ. * ಸಂದರ್ಶನ ನಡೆಸುವ ಸಮಿತಿಯನ್ನು ಕೆಪಿಎಸ್‌ಸಿಯ ಅಧ್ಯಕ್ಷರು ನೇಮಿಸಲಿದ್ದಾರೆ. ಈ ಸಮಿತಿಯಲ್ಲಿ ಒಟ್ಟು ನಾಲ್ಕು ಸದಸ್ಯರಿರಲಿದ್ದು, ಇಬ್ಬರು ಕೆಪಿಎಸ್‌ಸಿಯ ಸದಸ್ಯರಾಗಿದ್ದರೆ, ಇನ್ನಿಬ್ಬರು ವಿಷಯ ಪರಿಣಿತರಾಗಿರುತ್ತಾರೆ. ವಿಷಯ ಪರಿಣಿತರಾಗಿ ಐಐಎಸ್ಸಿ-ಐಎಂಬಿ ಅಥವಾ ವಿವಿಗಳ ಮಾಜಿ ಕುಲಪತಿ/ಪ್ರೊಫೆಸರ್‌ಗಳನ್ನು ಬಳಸಿಕೊಳ್ಳಲಾಗುತ್ತದೆ. * ಸಂದರ್ಶನದ ಬಗ್ಗೆ ಅಭ್ಯರ್ಥಿಗಳಿಗೆ ಮೊದಲೇ ತಿಳಿಸಲಾಗುತ್ತದೆ. ಆದರೆ ಯಾವ ಸಮಿತಿ ಸಂದರ್ಶನ ನಡೆಸಲಿದೆ ಎಂಬುದನ್ನು ಸಂದರ್ಶನದ ದಿನ ಬೆಳಗ್ಗೆ ಲಾಟರಿ ಮೂಲಕ ಆಯ್ಕೆ ಮಾಡಿ ನಿರ್ಧರಿಸಲಾಗುತ್ತದೆ. * ಈ ತಂಡ ಅಭ್ಯರ್ಥಿಯನ್ನು ನಿಗದಿತ ಸಮಯದಲ್ಲಿ ಸಂದರ್ಶಿಸಿ ಅಂಕಗಳನ್ನು ನಮೂದಿಸಬೇಕಿರುತ್ತದೆ. ಓರ್ವ ಅಭ್ಯರ್ಥಿಯನ್ನು 25ರಿಂದ 30 ನಿಮಿಷದೊಳಗೆ ಸಂದರ್ಶಿಸಬೇಕೆಂದು ಸೂಚಿಸಲಾಗಿರುತ್ತದೆ. * ಒಂದು ಸಮಿತಿ ಪ್ರತಿದಿನ ಕೇವಲ ಒಂಬತ್ತು ಅಭ್ಯರ್ಥಿಗಳಿಗೆ ಮಾತ್ರ ಸಂದರ್ಶನ ನಡೆಸಲಾಗುತ್ತದೆ. ಐವರಿಗೆ ಬೆಳಗ್ಗೆ ಮತ್ತು ನಾಲ್ವರಿಗೆ ಮಧ್ಯಾಹ್ನ ಸಂದರ್ಶನ ನಡೆಸಲಾಗುತ್ತದೆ. ಸಂದರ್ಶಕ ಸಮಿತಿಯನ್ನು ವಾರಕ್ಕೊಮ್ಮೆ ಬದಲಾಯಿಸಬೇಕಿರುತ್ತದೆ. * ಎಲ್ಲಾ ಅಭ್ಯರ್ಥಿಗಳ ಸಂದರ್ಶನ ಪೂರ್ಣಗೊಂಡ ನಂತರ ಅಂತಿಮ ಪರೀಕ್ಷೆ ಹಾಗೂ ವ್ಯಕ್ತಿತ್ವ ಪರೀಕ್ಷೆಯ ಅಂಕಗಳನ್ನು ಕೂಡಿಸಿ ಅತಿ ಹೆಚ್ಚು ಮಾರ್ಕ್ಸ್‌ಗಳ ಜ್ಯೇಷ್ಠತೆ ಆಧರಿಸಿ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ದಾಖಲೆ ಸಂಖ್ಯೆಯ ಹುದ್ದೆ 2014ನೇ ಸಾಲಿನಲ್ಲಿ ದಾಖಲೆ ಸಂಖ್ಯೆಯ ಹುದ್ದೆ(464)ಗಳಿಗೆ ಪರೀಕ್ಷೆ ನಡೆದಿದೆ. ಹಿಂದಿನ ವರ್ಷಗಳಲ್ಲಿ ಇದರ ಅರ್ಧದಷ್ಟು ಹುದ್ದೆಗಳಿಗೆ ಮಾತ್ರ ಪರೀಕ್ಷೆ ನಡೆಸಿದ್ದುಂಟು. ಹೀಗಾಗಿ ಸಂದರ್ಶನಕ್ಕೆ ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗುವುದು ಕೂಡ ದಾಖಲೆಯಾಗಲಿದೆ. 2015ರ ಜ.22ರಂದು 440 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ ಬಳಿಕ ಸರಕಾರ ಹೆಚ್ಚುವರಿಯಾಗಿ 24 ಹುದ್ದೆಗಳನ್ನು ಸೇರಿಸಿದ್ದರಿಂದ ಒಟ್ಟು ಹುದ್ದೆಗಳ ಸಂಖ್ಯೆ 464ಕ್ಕೆ ಏರಿದೆ. ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಿದ್ದಕ್ಕೆ 2.67 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪ್ರಿಲೀಮ್ಸ್‌ಗೆ ಹೆಸರು ನೋಂದಾಯಿಸಿಕೊಂಡಿದ್ದರು. 2015ರ ಏ.19ರಂದು ಪ್ರಿಲೀಮ್ಸ್‌ ಪರೀಕ್ಷೆ ಬಳಿಕ ಕೆಲ ತಿಂಗಳ ತರುವಾಯ ಅಂತಿಮ ಪರೀಕ್ಷೆಯ ನಡೆದು ಫಲಿತಾಂಶ ಕೂಡ 2016ರ ಏಪ್ರಿಲ್‌ ಅಂತ್ಯದಲ್ಲಿ ಪ್ರಕಟವಾಗಿತ್ತು.