kannada

2 ವರ್ಷದ ಪಿಜಿ ಮ್ಯಾನೇಜ್ ಮೆಂಟ್ ದೂರಶಿಕ್ಷಣ ಆರಂಭ 

webdesk | Monday, January 23, 2017 7:32 PM IST

ಅಹಮದಾಬಾದ್, : ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್-ಅಹಮದಾಬಾದ್ (ಐಐಎಂ-ಎ) ಸೋಮವಾರ ಮ್ಯಾನೇಜ್ ಮೆಂಟ್ ವಿಷಯದಲ್ಲಿ ಎರಡು ವರ್ಷದ ಸ್ನಾತಕೋತ್ತರ ಪದವಿ ಕೋರ್ಸ್ ಆರಂಭಿಸಿದೆ. ಆದರೆ ಇದು ದೂರಶಿಕ್ಷಣದ ಮೂಲಕ. ಉಪಗ್ರಹ ತಂತ್ರಜ್ಞಾನ ಆಧಾರಿತ ಶಿಕ್ಷಣ ಎಂಬುದು ಆಸಕ್ತಿಕರ ಸಂಗತಿ.

ಇಂಥ ಕೋರ್ಸ್ ವೊಂದನ್ನು ಐಐಎಂ ಆರಂಭಿಸುತ್ತಿರುವುದು ಇದೇ ಮೊದಲು. ಇದರ ಶುಲ್ಕ ಹದಿನೇಳು ಲಕ್ಷ ರುಪಾಯಿ ಆಗುತ್ತದೆ. ಕೆಲಸ ನಿರ್ವಹಿಸುತ್ತಿರುವವರು ಹಾಗೂ ಉದ್ಯಮಿಗಳನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಕೋರ್ಸ್ ಆರಂಭಿಸಲಾಗಿದೆ. ಐಐಎಂ-ಎ ಜೂನ್ ನಿಂದ ಆರಂಭಿಸುತ್ತದೆ. ಆರಂಭದ ಹಂತ, ಮಧ್ಯಮ ಹಾಗೂ ಹಿರಿಯ ಸ್ಥಾನಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಹಾಗೂ ಉದ್ಯಮಿಗಳು ಸೇರಬಹುದು ಎಂದು ಐಐಎಂ-ಎ ನಿರ್ದೇಶಕ ಆಶಿಶ್ ನಂದಾ ತಿಳಿಸಿದ್ದಾರೆ.

ಐಐಎಂ-ಎ ಮೊದಲ ಬಾರಿಗೆ ಈ ರೀತಿ ಎರಡು ವರ್ಷಗಳ ಸ್ನಾತಕೋತ್ತರ ಮ್ಯಾನೇಜ್ ಮೆಂಟ್ ಪದವಿಯನ್ನು ದೂರಶಿಕ್ಷಣದ ಮೂಲಕ ನೀಡುತ್ತಿದೆ ಎಂದು ಅವರು ಹೇಳಿದರು. ಪದವಿಯಲ್ಲಿ ಶೇ 50ರಷ್ಟು ಅಂಕ ಪಡೆದವರು ಅರ್ಜಿ ಸಲ್ಲಿಸಬಹುದು. ಜಿಮ್ಯಾಟ್/ಕ್ಯಾಟ್ ಪರೀಕ್ಷೆಯ ಅಂಕಗಳು ಅಥವಾ ಸಂಸ್ಥೆಯು ನಡೆಸುವ ಆನ್ ಲೈನ್ ಪ್ರವೇಶ ಪರೀಕ್ಷೆಯ ಅಂಕಗಳ ಆಧಾರದಲ್ಲಿ ಆಯ್ಕೆ ಮಾಡಲಾಗುವುದು.

ಇಡೀ ಕೋರ್ಸ್ ಸ್ವರೂಪ ರೆಗ್ಯುಲರ್ ನಂತೆಯೇ ಇರುತ್ತದೆ. ಆದರೆ ದೂರಶಿಕ್ಷಣದ ಮೂಲಕ ನೀಡಲಾಗುತ್ತದೆ. ಅಭ್ಯರ್ಥಿಗಳು ವೈಯಕ್ತಿಕವಾಗಿ ಮತ್ತು ತಂಡವಾಗಿ ತರಗತಿಗಳಂತೆಯೇ ಪ್ರಾಜೆಕ್ಟ್ ಗಳನ್ನು ಮಾಡಬೇಕಾಗುತ್ತದೆ. ಅದಕ್ಕೆ ಐಐಎಂ-ಎ ಪ್ರೊಫೆಸರ್ ಗಳು ಮಾರ್ಗದರ್ಶನ ಕೂಡ ನೀಡುತ್ತಾರೆ

ಹ್ಯೂಸ್ ಗ್ಲೋಬಲ್ ಎಜುಕೇಷನ್ ಜೊತೆ ಸೇರಿ ಐಐಎಂ-ಎ ಈ ಕೋರ್ಸ್ ರೂಪಿಸಿದೆ. ಹ್ಯೂಸ್ ಗ್ಲೋಬಲ್ ಎಜುಕೇಷನ್ ಉಪಗ್ರಹ ಆಧಾರಿತ ಶಿಕ್ಷಣ ದೊರಕಿಸುವುದಕ್ಕೆ ತಂತ್ರಜ್ಞಾನದ ನೆರವು ನೀಡುತ್ತದೆ. ಇಡೀ ಕೋರ್ಸ್ ಗೆ 17 ಲಕ್ಷ ರುಪಾಯಿ ಖರ್ಚಾಗುತ್ತದೆ